ಬಾಲಾಪರಾಧ - 
ಒಂದು ವಯೋಮಿತಿಯೊಳಗಿನ ಬಾಲಕರು ಮಾಡುವ ಸಮಾಜವಿರೋಧಿ ಎನಿಸುವ ಅಥವಾ ಅಪರಾಧವೆಂದು ಪರಿಗಣಿಸಲಾಗುವ ದುಷ್ಕøತ್ಯಗಳನ್ನು ಈ ಹೆಸರಿನಿಂದ ಕರೆಯಲಾಗುತ್ತದೆ. ಅಂದರೆ ಹದಿನಾಲ್ಕು, ಹದಿನಾರು ಅಥವಾ ಯೌವನೋದಯಕ್ಕೆ ಮುಂಚೆ ಮಾಡುವ ಹದಿವಯಸ್ಸಿನ ಅಪರಾಧಗಳು (ಜ್ಯೂವಿನೆಲ್ ಡಿಲಿಂಕ್ವೆನ್ಸಿ). ಬೀಡಿ ಸೇದುವುದು, ಶಾಲೆಗೆ ತಪ್ಪಿಸಿಕೊಳ್ಳುವುದು, ಬಿಡಾಡಿ ಅಲೆಯುವುದು, ಕಿಸೆಗಳ್ಳತನ ಮಾಡುವುದರಿಂದ ಹಿಡಿದು ಶೀಲಭಂಗ ಮತ್ತು ಕೊಲೆಗಳವರೆಗಿನ ಎಲ್ಲ ರೀತಿಯ ಅಪರಾಧಗಳು ಈ ವ್ಯಾಪ್ತಿಗೆ ಸೇರುತ್ತವೆ. ವಾಹನಗಳ ಕಳವು, ಮನೆಮುರಿಯುವುದು, ಟಿಕೀಟು ರಹಿತ ಪ್ರಯಾಣ, ಜೂಜು, ಹೊಡೆದಾಟ, ಮದ್ಯಪಾನ, ಮಾದಕದ್ರವ್ಯಗಳ ಸೇವನೆ ಇವು ಹೆಚ್ಚಿನ ಪ್ರಾಮಾಣದ ಬಾಲಾಪರಾಧಗಳು.

ಈ ದುಷ್ಕøತ್ಯಗಳಿಗೆ ನಾನಾ ಕಾರಣಗಳುಂಟು. ಅನಾರೋಗ್ಯ, ಶಾರೀರಿಕ ವೈಕಲ್ಯಗಳು, ಗ್ರಂಥಿಗಳ ತೊಂದರೆ, ವಿವಿಧರೀತಿಯ ಮಾನಸಿಕ ನ್ಯೂನತೆ ಹಾಗೂ ರೋಗಗಳು, ಭಾವನಾತ್ಮಕ ಅಸ್ಥಿರತೆ, ಅನಿರ್ಬಂಧಿತ ಲೈಂಗಿಕ ಬಯಕೆ ಮೊದಲಾದ ಶಾರೀರಿಕ-ಮಾನಸಿಕ ಕಾರಣಗಳು, ಹೆತ್ತವರ ಅಲಕ್ಷ್ಯ, ಭಗ್ನಕುಟುಂಬದ ಹಾನಿಕಾರಕ ಪರಿಣಾಮಗಳು ಕುಟುಂಬದಲ್ಲಿಯ ಆಪರಾಧೀ ಮನೋಭಾವಗಳು, ಕೆಡುಕರ ತಂಡದ ಪ್ರಭಾವ, ದಾರಿದ್ರ್ಯ, ಜೂಜು, ಕೆಟ್ಟಸಹವಾಸ ಅತೃಪ್ತಿಕರ ವಿದ್ಯಾಭ್ಯಾಸ, ತೀವ್ರಸ್ಪರ್ಧೆ ಹಾಗೂ ವ್ಯಾಪಕವಾದ ಹತಾಶೆಯ ಭಾವನೆ, ಅಹಿತಕರ ಮನೋರಂಜನೆ ರೇಡಿಯೋ, ವೃತ್ತಪತ್ರಿಕೆ, ಪತ್ತೇದಾರಿ ಕಥೆಗಳಿಂದ ಬರುವ ಉದ್ರೇಕ ಮೊದಲಾದ ಕೌಟುಂಬಿಕ ಹಾಗೂ ಸಾಮಾಜಿಕ ಕಾರಣಗಳು ಇಲ್ಲಿ ಗಣನೆಗೆ ಬರುತ್ತವೆ.

ಪಾಶ್ಚಾತ್ಯ ದೇಶಗಳಲ್ಲಿ ಈ ಸಮಸ್ಯೆ ಆಧುನಿಕ ಸಮಾಜದ ಶಾಪ ಎನ್ನುವಷ್ಟು ಉಲ್ಬಣಗೊಂಡಿದೆ. ಕೆಲವು ದೇಶಗಳಲ್ಲಂತೂ ಬಾಲಾಪರಾಧಿಗಳ ತಂಡಗಳೇ ಇದ್ದು ಅವು ಭಯಾನಕ ಕೃತ್ಯಗಳಲ್ಲಿ ತೊಡಗಿರುವುದುಂಟು. ಇಂಗ್ಲೆಂಡಿನ ಟೆಡ್ಡಿಬಾಯ್ ಗ್ಯಾಂಗ್, ಅರ್ಜೆಂಟೀನಾದ ಬಾರ್‍ಗ್ಯಾಂಗ್, ಸ್ವೀಡನ್ನಿನ ರಗ್ಗಾರ್ ತಂಡಗಳು, ಫಾರ್ಮೊಸಾದ ಪೌಪೌ ಇಂಥ ತಂಡಗಳಿಗೆ ಕೆಲವು ಉದಾಹರಣೆಗಳು. ಭಾರತದಲ್ಲಿ ಸಮಷ್ಟಿ ಕುಟುಂಬ ಪದ್ಧತಿ. ಗ್ರಾಮ ಹಾಗೂ ಸ್ಥಳೀಯ ಸಮುದಾಯ ವ್ಯವಸ್ಥೆಗಳ ಬಿಗುವಿನ ನಿಯಂತ್ರಣದಿಂದಾಗಿ ಇಂಥ ತಂಡಗಳು ಅಷ್ಟಾಗಿ ಇಲ್ಲ. ಆದರೆ ಕಳೆದ ಕೆಲವು ದಶಕಗಳಿಂದ ನಗರಗಳಲ್ಲಿ ಇಂಥ ತಂಡಗಳು ಇವೆಯೆಂದು ಸಮೀಕ್ಷೆಗಳು ತಿಳಿಸುತ್ತವೆ.	
								(ಎಚ್.ವಿ.ಎನ್.)

ಕಿರಿಯರು ಕಾನೂನಿಗೆ ವಿರೋಧವಾಗಿ ವರ್ತಿಸಿದಾಗ ಅವರನ್ನು ಬಾಲಾಪರಾಧಿಗಳ ಗುಂಪಿಗೆ ಸೇರಿಸುವುದುಂಟು. ಆದರೆ ಕಿರಿಯರ ವಯಸ್ಸಿನ ವ್ಯಾಪ್ತಿ ಇಷ್ಟೇ ಎಂದು ಹೇಳಲು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಕಡ್ಡಾಯ ವಿದ್ಯಾಭ್ಯಾಸಕ್ಕೆ ವಯಸ್ಸಿನ ಪರಿಮಿತಿ ಇದೆ. ಅಪರಾಧಿಗಳು ಆ ವಯಸ್ಸಿನ ಶ್ರೇಣಿಯಲ್ಲಿದ್ದರೆ ಅವರು ಬಾಲಾಪರಾಧಿಗಳೆಂದು ಪರಿಗಣಿಸಲ್ಪಡುವರು.

ಬಾಲಾಪರಾಧಗಳು ನಾನಾ ಬಗೆಯವು. ಸುಳ್ಳು, ಕಳ್ಳತನ, ಅಶ್ಲೀಲ ಮಾತು ಕಥೆ, ಮಿತಿಮೀರಿದ ಮದ್ಯಸೇವನೆ, ಧೂಮಪಾನ ಮುಂತಾದ ಕೃತ್ಯಗಳಿಂದ ಹಿಡಿದು ಪರರ ಹಕ್ಕುಭಾವ್ಯತೆ ಮತ್ತು ಪ್ರಾಣಕ್ಕೆ ಧಕ್ಕೆ ತಗಲುವಂಥ ಮಹಾಪರಾಧಗಳನ್ನು ಬಾಲಾಪರಾಧಿಗಳು ಎಸಗುವುದುಂಟು. ಬಾಲಕಿಯರು ಹೆಚ್ಚಾಗಿ ಲೈಂಗಿಕ ಅಪರಾಧ, ಹತೋಟಿಗೆ ಮೀರಿದ ವ್ಯವಹಾರ ಮತ್ತು ಮನೆಯಿಂದ ಓಡಿ ಹೋಗುವ ಕೃತ್ಯಗಳಲ್ಲಿ ತೊಡಗುವರು.

ವಯಸ್ಕ ಅಪರಾಧಿಗಳ ಅಪರಾಧವನ್ನು ಪರಿಶೀಲಿಸಿದಾಗ ಹಿನ್ನೆಲೆಯಲ್ಲಿ ಒಂದಲ್ಲ ಒಂದು ಉದ್ದೇಶ ಅಡಗಿರುವುದು ಕಾಣಬರುವುದು. ಅಸೂಯೆ, ಕೋಪ, ದ್ವೇಷ, ಸೇಡು ಜೀವನೋಪಾಯ ಮುಂತಾದವು ಅವರಲ್ಲಿ ಪ್ರೇರೇಪಣಾ ವಸ್ತುಗಳಾಗಿರುತ್ತವೆ. ಆದರೆ ಬಾಲಾಪರಾಧಿಗಳ ಪ್ರವೃತ್ತಿಗಳೇ ಬೇರೆ ತೆರನಾಗಿರುತ್ತವೆ. ಅವರು ಬೆಳೆಯುವ ಆವರಣ, ತಾಯಿತಂದೆ, ಒಡಹುಟ್ಟಿದವರು, ಶಾಲೆ, ಸಹವಾಸ, ಬಾಲಾಪರಾಧಿಗಳ ಬುದ್ಧಿಮಟ್ಟ ಮತ್ತು ವ್ಯಕ್ತಿತ್ವ-ಇವು ಕಾರಣವಾಗಿರುತ್ತವೆ.

ಮೊದಲಿಗೆ ಬಾಲಾಪರಾಧಕ್ಕೆ ಕಾರಣ ಅನುವಂಶೀಯತೆ ಎಂಬ ನಂಬಿಕೆ ಇತ್ತು. ಅನಂತರ ಅಂಗಾಂಗಗಳ ವೈಪರೀತ್ಯ ಬಾಲಾಪರಾಧಕ್ಕೆ ಕಾರಣ ಎಂಬ ವಿಚಾರಸರಣಿ ಬೆಳೆಯಿತು. ಇವೆರಡು ವಾದಗಳಿಗೂ ಸಾಕಷ್ಟು ಸಾಕ್ಷೀ ಪ್ರಮಾಣಗಳು ದೊರೆಯದೆ ಇದ್ದುದರಿಂದ ಬಾಲಾಪರಾಧಿಯ ಮನಃಸ್ಥಿತಿಯ ಪರಿಶೋಧನೆಗೆ ಮೊದಲಾಯಿತು. ಮನಶ್ಯಾಸ್ತ್ರಜ್ಞರು ಮಕ್ಕಳ ಸುತ್ತಮುತ್ತಲಿನ ವಾತಾವರಣದಲ್ಲಿ ಕಾರಣ ಕಂಡುಹಿಡಿಯಲು ಹೊರಟರು.

ಅನೇಕ ಪರಿಶೋಧನೆಗಳನ್ನು ನಡೆಸಿ, ಕೇವಲ ಒಂದು ಕಾರಣದಿಂದ ಕಿರಿಯರು ಅಪರಾಧವೆಸಗುವುದಿಲ್ಲ; ಒಂದಕ್ಕಿಂತ ಹೆಚ್ಚಾದ ಕಾರಣಗಳು ಮೇಳೈಸಿದಾಗ ಬಾಲಕರ ಅಪರಾಧಕ್ಕೆ ಪ್ರಚೋದನೆ ಒದಗುವದೆಂಬ ತೀರ್ಮಾನಕ್ಕೆ ಬರಲಾಯಿತು. ಅಂದರೆ ಬಡತನ, ತಾಯಿತಂದೆಗಳ ನೀತಿಮಟ್ಟ ಮತ್ತು ದುಃಶ್ಚಾಳಿ, ಒಡೆದ ಸಂಸಾರ, ಶಾಲೆ, ಒಡನಾಡಿಗಳು, ಮನರಂಜನೆ, ವಾಸಿಸುವ ಮೊಹಲ್ಲಾ, ಹುಡುಗನ ಬುದ್ಧಿಮಟ್ಟ, ಮನಃಸ್ಥಿತಿ ಮತ್ತು ದೇಹಾರೋಗ್ಯ ಇವುಗಳು ಒಂದಲ್ಲ ಒಂದು ರೀತಿಯಲ್ಲಿ ಕಾರಣವಾಗಿರುತ್ತವೆ. ಬಡತನದಿಂದಾಗಿ ಮಗುವಿಗೆ ಇಷ್ಟವಾದ ಆಟದ ಸಾಮಾನು ತಿಂಡಿತೀರ್ಥ ದೊರೆಯದೆ ಹೋಗಬಹುದು. ಅದರಿಂದಾಗಿ ಅವನಿಗೆ ತನಗಿಂತ ಹೆಚ್ಚು ಭಾಗ್ಯವಂತನಾದ ಒಡನಾಡಿಯಲ್ಲಿ ಅಸಹನೆ, ಕೋಪ ಅಸೂಯೆ ಮೂಡಿ ಕಳ್ಳತನ, ಸುಳ್ಳು, ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಬಹುದು. ಈ ಬಗೆಯ ನಡೆವಳಿಕೆ ಹಿರಿಯರ ಮತ್ತು ಸಹಪಾಠಿಗಳ ಅಥವಾ ಒಡನಾಡಿಗಳ ಅನಾದರಣೆಯಿಂದಾಗಿ ಸಂಭವಿಸಬಹುದು. ತಂದೆ ಕುಡುಕ, ಜೂಜುಗಾರನಾಗಿದ್ದು, ತಾಯಿ ಅನೀತಿವಂತಳಾಗಿದ್ದಲ್ಲಿ ಅಥವಾ ತಾಯಿತಂದೆ ಬುದ್ಧಿಹೀನರಾಗಿ ಪದೇ ಪದೇ ಭವೋದ್ರೇಕಗೊಳ್ಳುವ ಹವ್ಯಾಸದವರಾದರೆ, ಮನೆಯಲ್ಲಾಗುವ ಘರ್ಷಣೆ, ಹಿಂಸೆ ಮತ್ತು ಭಯಾನಕ ಅನುಭವಗಳಿಗೆ ಪ್ರತಿಕ್ರಿಯಾರೂಪವಾಗಿ ಮಗು ಅಪರಾಧಗಳಲ್ಲಿ ತೊಡಗಬಹುದು. ಇನ್ನು ತಂದೆ ತೀರಿಹೋದಲ್ಲಿ ಅಥವಾ ಹೆಂಡತಿ ಮಕ್ಕಳನ್ನು ತ್ಯಜಿಸಿ ಹೋದಲ್ಲಿ, ತಾಯಿ ಜೀವನಕ್ಕಾಗಿ ವೃತ್ತಿ ಹಿಡಿದಾಗ ಮನೆಯ ಪರಿಸ್ಥಿತಿ ಬೇರೆಯಾಗಿ ಹಿರಿಯರ ಅಡ್ಡಿ ಆತಂಕವಿಲ್ಲದೆ ಬೆಳೆಯುವ ಮಕ್ಕಳು ಕೆಟ್ಟ ಸಹವಾಸಮಾಡಿ ಅಪರಾಧಿಗಳಾಗಬಹುದು. ಈ ದುಃಸ್ಥಿತಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳಲ್ಲಿ ಸಂಭವಿಸಿದರೆ ಅವುಗಳ ಪ್ರಭಾವ ಉಗ್ರ. ಹಲವು ವೇಳೆ ನಾನಾ ಕಾರಣಗಳಿಂದಾಗಿ ಶಾಲೆಯಲ್ಲಿ ಮಗುವಿನ ಬಾಳು ದುಸ್ಸಹವಾಗಿರುತ್ತದೆ. ಸಹಪಾಠಿಗಳ ಕಿರುಕುಳ, ಉಪಾಧ್ಯಾಯರ ನಿಂದೆ ಸಹಿಸಲಾರದ ಮಗು ಶಾಲೆ ತಪ್ಪಿಸಿಕೊಳ್ಳಲು ಮೊದಲು ಮಾಡಿ, ಕೆಲಸವಿಲ್ಲದೆ ಅಲೆಯತೊಡಗಿದಾಗ ಕೆಟ್ಟ ಸಹವಾಸಕ್ಕೆ ಬಿದ್ದು ಬಾಲಾಪರಾಧಿಯಾಗಬಹುದು. ಹೀಗೆ ಯಾವುದೇ ಒಂದು ಅಂಶ ತೆಗೆದುಕೊಂಡು ಪ್ರಯೋಗ ಫಲಿತಾಂಶಗಳ ಆಧಾರದ ಮೇಲೆ, ಅದರ ಪರಿಣಾಮ ಇಷ್ಟೇ ಪ್ರಮಾಣದ್ದು ಎಂದು ಹೇಳಲು ಬರುವುದಿಲ್ಲ. ಆದರೆ ಈ ಅಂಶಗಳು ಒಂದಲ್ಲ ಒಂದು ಪ್ರಮಾಣದಲ್ಲಿ ಬಾಲಾಪರಾಧಿಗಳಲ್ಲಿ ಕಂಡುಬರುವುದಂತೂ ಖಚಿತ. ಇಂಥ ಹಲವಾರು ಕಾರಣಗಳು ಒಟ್ಟುಗೂಡಿ ಪ್ರಭಾವ ಬೀರಿದಲ್ಲಿ ಅದು ಅಪಾಯದ ತೀವ್ರ ಮಟ್ಟ ಮುಟ್ಟುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ಬಾಲಾಪರಾಧಿಗಳು ಮಂಕುಬುದ್ಧಿಯುಳ್ಳವರೆಂದು ಅನೇಕ ಪರಿಶೋಧನೆಗಳು ಸೂಚಿಸಿವೆ. ಬಾಲಾಪರಾಧಿಗಳಲ್ಲಿ ಕೆಲವರು ಚುರುಕು ಬುದ್ಧಿಯುಳ್ಳವರೂ ಇರುತ್ತಾರೆ. ಅಂಥವರನ್ನು ತಿದ್ದುವ ಕಾರ್ಯ ಸುಲಭ ಮತ್ತು ಸಂಭವನೀಯ.

ದೈಹಿಕ ವಿಕಾರ ಕೆಲವೊಮ್ಮೆ ಸೂಕ್ಷ್ಮರೀತಿಯಲ್ಲಿ ಎಳೆಯರ ಮನಸ್ಸನ್ನು ಕೆಡಿಸುವುದುಂಟು. ತನಗಾಗಿರುವ ಅನ್ಯಾಯವನ್ನು ತುಂಬಿಸಲು ಮಗು ರೀತಿನೀತಿ ಇಲ್ಲದ ಮಾರ್ಗದಲ್ಲಿ ಹೋಗಲೂಬಹುದು.

ಕಾರಣ ಕಂಡುಹಿಡಿದರೆ, ಪರಿಹಾರ ಒದಗಿದಂತೆಯೇ, ಕಾರಣ ನಿವಾರಿಸಿದರೆ ಬಾಲಾಪರಾಧಿಯನ್ನು ದಾರಿಗೆ ತಂದಂತೆಯೇ. ವಾತಾವರಣದಿಂದಾಗಿ ಬಾಲಾಪರಾಧಿಯಾಗಿ ಮಗುವನ್ನು ಬೇರೆ ವಾತಾವರಣಕ್ಕೆ ಬದಲಾಯಿಸುವುದು ವಿಹಿತ. ತಾಯಿತಂದೆಗಳು ತಮ್ಮ ರೀತಿನೀತಿಗಳನ್ನು ಬದಲಾಯಿಸಿಕೊಳ್ಳಬೇಕು. ಮಕ್ಕಳ ಪಾಲನೆಯ ವಿಷಯವಾಗಿ ಯುಕ್ತ ತಿಳಿವಳಿಕೆ ಕೊಡಬೇಕು. ಆರ್ಥಿಕ ಮುಗ್ಗಟ್ಟು, ಬುದ್ಧಿಶಕ್ತಿಗೆ ಅನುಗುಣವಾದ ಶಾಲೆಯ ಕಾರ್ಯಕ್ರಮ, ಉಪಾಧ್ಯಾಯರ, ಒಡನಾಡಿಗಳ ಮತ್ತು ಒಡಹುಟ್ಟಿದವರ ಸ್ನೇಹಪರತೆ, ವಿಹಿತವಾದ ಮನರಂಜನೆ-ಈ ಅಂಶಗಳ ಸುಧಾರಣೆಯಾದಲ್ಲಿ ಮಕ್ಕಳು ತಪ್ಪು ದಾರಿ ಹಿಡಿಯುವುದನ್ನು ತಪ್ಪಿಸಿದಂತಾಗುವುದು.
(ಎನ್.ಎಸ್.ಎಸ್.)

ಮಕ್ಕಳ ಅಪರಾಧ ಪ್ರವೃತ್ತಿ ನಾಗರಿಕತೆಯಷ್ಟೆ ಹಳೆಯದು. ಈ ಅಪರಾಧ ಮತ್ತು ಶಿಕ್ಷೆಗಳ ಬಗೆಗಿನ ನ್ಯಾಯಿಕ ಕಲ್ಪನೆ ಹಾಗೂ ನ್ಯಾಯ ವ್ಯವಸ್ಥೆಗಳು ಅನೇಕ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಇದ್ದುದನ್ನು ಕಾಣಬಹುದಾಗಿದೆ. ಅಪರಾಧ ಯಾರೇ ಮಾಡಲಿ ಅಪರಾಧ ಅಪರಾಧವೇ. ಅದಕ್ಕೆ ತಕ್ಕ ಶಿಕ್ಷೆ ಅಥವಾ ದಂಡನೆ ವಿಧಿಸಬೇಕೆಂಬ ವ್ಯವಸ್ಥೆ ಪಾಶ್ಚಾತ್ಯ ದೇಶಗಳಲ್ಲಿ ಇತ್ತು. ಮಕ್ಕಳ ಅಪರಾಧಕ್ಕೂ ಹಿರಿಯರ ಅಪರಾಧಕ್ಕೂ ವ್ಯತ್ಯಾಸವಿದೆ. ಬಾಲಾಪರಾಧವನ್ನು ಬೇರೆ ದೃಷ್ಟಿ ಕೋನದಿಂದ ನೋಡಿ ಪರಾಮರ್ಶಿಸಬೇಕು ಎಂಬ ವಿಚಾರ ಸರಣಿ ತೀರ ಇತ್ತೀಚಿನದು ಎಂದು ಪಾಶ್ಚಾತ್ಯ ದೇಶಗಳ ನ್ಯಾಯಶಾಸ್ತ್ರಜ್ಞರ ಮತ.
ಪ್ರಾಚೀನ ಭಾರತದಲ್ಲಿ ಆಚರಣೆಯಲ್ಲಿದ್ದ ಭಾರತೀಯ ನ್ಯಾಯವ್ಯವಸ್ಥೆಯ ಬಗ್ಗೆ ಹೆಚ್ಚಿನ ಸಂಶೋಧನೆ ಆಗಿಲ್ಲ. ಕ್ರಿ.ಪೂ. 300 ವರ್ಷಗಳಷ್ಟು ಹಿಂದೆಯೇ ಬಾಲಾಪರಾಧದ ಬಗ್ಗೆ ನ್ಯಾಯಸ್ರತ್ರಗಳು ಇದ್ದಿರಬಹುದು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಮಕ್ಕಳ ಆಸ್ತಿ ಮತ್ತು ಮಕ್ಕಳ ಅಪರಾಧಗಳ ಬಗ್ಗೆ ಹಲವು ವಿವರಗಳು ದೊರೆಯುತ್ತವೆ. ಅನಾಥ ಮಗುವಿನ ಆಸ್ತಿಯನ್ನು ಧರ್ಮದರ್ಶಿಗಳು ನೋಡಿಕೊಳ್ಳುತ್ತಿದ್ದರು. ಎಂಟು ವರುಷ ಮೀರಿದ ಮಗುವನ್ನು ನೀಚಕಾರ್ಯಕ್ಕೆ ಹಚ್ಚುತ್ತಿದ್ದವರಿಗೆ ದಂಡ ಹಾಕಲಾಗುತ್ತಿತ್ತು. ಅರ್ಥಶಾಸ್ತ್ರದ ಪ್ರಕಾರ ಕೆಲವು ಸಂದರ್ಭಗಳಲ್ಲಿ ಮಕ್ಕಳು ಮಾಡಿದ ಅಪರಾಧಕ್ಕೆ ಅವರನ್ನು ದಂಡಿಸಲಾಗುತ್ತಿದ್ದಿಲ್ಲ. ಅವರ ಹಿರಿಯರನ್ನೊ ಅಥವಾ ಬಾಲಾಪರಾಧಿ ಆಳಾಗಿದ್ದಲ್ಲಿ ಬಾಲಾಪರಾಧಿಯ ಯಜಮಾನನನ್ನೊ ದಂಡಿಸಲಾಗುತ್ತಿತ್ತು. ಮಕ್ಕಳನ್ನು ಕಾರಾಗೃಹದಲ್ಲಿ ಇಡುತ್ತಿದ್ದುದರ ಬಗೆಗೆ ಮಾಹಿತಿ ದೊರಕಿದರೂ ವಿವರಗಳು ಇಲ್ಲ. ಭಾರತದಲ್ಲಿ ಆಂಗ್ಲರ ಆಡಳಿತ ಬರುವವರೆಗಿನ ಮುಂಚಿನ ಬಾಲಾಪರಾಧದ ನ್ಯಾಯಿಕ ಕಲ್ಪನೆ ಹಾಗೂ ವ್ಯವಸ್ಥೆಗಳ ವಿವರಗಳು ದೊರೆಯುವುದಿಲ್ಲ. ಆಂಗ್ಲರ ಆಡಳಿತ ಬಂದ ಮೇಲೆ ಅವರ ನ್ಯಾಯಿಕ ವ್ಯವಸ್ಥೆಗಳೇ ಭಾರತದಲ್ಲಿಯೂ ಆಚರಣೆಗೆ ಬಂದವು.

ಕೂಕ್ ಕೌಂಟಿಯಲ್ಲಿ (1899) ಮಕ್ಕಳ ನ್ಯಾಯಾಲಯ ಸ್ಥಾಪಿಸಿದಾಗ ಬಾಲಾಪರಾಧಕ್ಕೆ ನ್ಯಾಯಿಕ ಸ್ವರೂಪ ದೊರಕಿತು. ಮಕ್ಕಳಲ್ಲಿ ಕಾಣಬಹುದಾದ ಪಾತಕ ಪ್ರವೃತ್ತಿ ಮತ್ತು ಅದನ್ನು ತಡೆಗಟ್ಟುವ ನ್ಯಾಯಿಕ ವ್ಯವಸ್ಥೆಗಳು ಇತ್ತೀಚಿನ ಶತಮಾನಗಳ ಘಟನೆಗಳಾದರೂ, ಈ ವಿವೇಚನೆಗೆ ಐತಿಹಾಸಿಕ ಹಿನ್ನೆಲೆ ಇಲ್ಲದಿಲ್ಲ. ಹತ್ತನೆಯ ಶತಮಾನದಲ್ಲಿ ಇಂಗ್ಲೆಂಡಿನ ರಾಜನಾಗಿದ್ದ ಅಥೆಲಸ್ಟನ್‍ನು ಹದಿನೈದು ಚಳಿಗಾಲಗಳನ್ನು ಕಂಡಿರದ ವ್ಯಕ್ತಿಯನ್ನು ಯಾರೂ ಕೊಲ್ಲಕೂಡದೆಂದು ರಾಜಾಜ್ಞೆ ಹೊರಡಿಸಿದ್ದ. ಪೋಪ್ ಕ್ಲಿಮೆಂಟ್ xi ಕೈಕೊಂಡ ಅಪರಾಧಿಮಕ್ಕಳ ನೈತಿಕ ಪುನರುತ್ಥಾನ ಕಾರ್ಯ (1704) ಬಾರಸ್ಟಲ್ ಶಿಕ್ಷಣಕ್ಕೂ ಬಾಲಾಪರಾಧದ ನ್ಯಾಯಿಕ ವಿವೇಚನೆಗೂ ಪ್ರಚೋದನೆ ನೀಡಿತು. ಈ ಬಗ್ಗೆ ಇಂಗ್ಲೆಂಡಿನ ಮ್ಯಾರೀನ್ ಸೊಸೈಟಿ 1756ರಲ್ಲಿ ಕೈಗೊಂಡ ಚಟುವಟಿಕೆಗಳು, 1826ರಲ್ಲಿ ನ್ಯೂಯಾರ್ಕ್‍ನಲ್ಲಿ ಸ್ಥಾಪಿಸಿದ ರಕ್ಷಣಾ ಗೃಹ 1862ರ ಸುಮಾರಿಗೆ ಸ್ವಿಡ್ಜರ್‍ಲ್ಯಾಂಡಿನಲ್ಲಿ ಬಾಲಾಪರಾಧ ನಿರ್ಣಯಕ್ಕೆ ಅನ್ವಯಿಸಿಕೊಳ್ಳಲಾದ ಪ್ರಕ್ರಿಯಾ ವಿಧಾನ ಮುಂತಾದವುಗಳು ಐತಿಹಾಸಿಕ ಘಟ್ಟಗಳಾಗಿವೆ.

ಈ ಎರಡು ಶತಮಾನಗಳಲ್ಲಿ ಬಾಲಾಪರಾಧಕ್ಕೆ ಕಾರಣಗಳು ಮತ್ತು ಅದನ್ನು ತಡೆಯುವ ಸಂಬಂಧದಲ್ಲಿ ಹೆಚ್ಚಿನ ಜಿಜ್ಞಾಸೆ ನಡೆದಿದೆ. ಬಡತನ, ಅನಾರೋಗ್ಯಕರ ಮನೆ, ದೈಹಿಕ ನ್ಯೂನತೆ, ಸಾಮಾಜಿಕ ಪರಿಸರ ಇವುಗಳು ಮಕ್ಕಳಲ್ಲಿಯ ಪಾತಕ ಪ್ರವೃತ್ತಿಗೆ ಕಾರಣವಾದರೆ, ಸಾಮಾಜಿಕ ಪರಿವರ್ತನೆ, ಯುದ್ಧಗಳು ಮತ್ತು ಬರಗಾಲಗಳು ಬಾಲಾಪರಾಧಗಳ ಪ್ರಕರಣಗಳನ್ನು ಹೆಚ್ಚಿಸಿವೆ. ಬಾಲಾಪರಾಧದ ತಡೆಗೆ ಮಕ್ಕಳ ಸುಧಾರಣೆ ಆವಶ್ಯಕ. ಇಂಗ್ಲೆಂಡಿನಲ್ಲಿ ಈ ಸುಧಾರಣಾ ಚಟುವಟಿಕೆಗೆ ಹೆಚ್ಚಿನ ಪ್ರಾಮುಖ್ಯ ದೊರೆಯಲು 1854ರ ಸುಧಾರಣಾ ಶಾಲೆಗಳ ಕಾನೂನು ಕಾರಣವಾಯಿತು. ಪ್ರತ್ಯೇಕ ಸಂಸ್ಥೆಗಳ ಮುಖಾಂತರ ಮಕ್ಕಳ ಸುಧಾರಣೆ ಮಾಡಬೇಕೆಂಬ ವಿಚಾರಕ್ಕೆ ಈ ಕಾನೂನು ಅವಕಾಶ ಮಾಡಿಕೊಟ್ಟಿತ್ತು. ಸಾಮಾಜಿಕವಾಗಿ ತೊಂದರೆಗೀಡಾದ ಅಥವಾ ಅಪರಾಧಿಗಳೆನಿಸಿದ ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿಯ ಕಾರ್ಯವನ್ನು ಇಂಗ್ಲೆಂಡಿನಲ್ಲಿ ಗೃಹ ಇಲಾಖೆಯಲ್ಲಿಯ ಮಕ್ಕಳ ವಿಭಾಗ ನೋಡಿಕೊಳ್ಳುತ್ತಿತ್ತು. ಭಾರತದಲ್ಲಿ ಸುಧಾರಣಾ ಶಾಲೆಗಳ ಕಾನೂನು 1870ರಲ್ಲಿ ಜಾರಿಗೆ ಬಂತು. 19ನೆಯ ಶತಮಾನದ ಕೊನೆಯ ವೇಳೆಗೆ ಅನೇಕ ದೇಶಗಳಲ್ಲಿ ಇಂಥ ಕಾನೂನುಗಳು ಮತ್ತು ಶಾಲೆಗಳು ಅಸ್ತಿತ್ವಕ್ಕೆ ಬಂದುವು. ರಕ್ಷಣಾಗೃಹ, ಪ್ರಮಾಣಿತ ಶಾಲೆ ಪ್ರೊಬೇಷನ್ ಅಧಿಕಾರಿ ಮುಂತಾದ ವಿಷಯಗಳಲ್ಲಿ ಇಂಗ್ಲೆಂಡ್, ಭಾರತ, ಅಮೆರಿಕ ದೇಶಗಳು ಕೆಲವು ದೃಷ್ಟಿಗಳಿಂದ ಹೋಲುತ್ತದೆ. ಬಾಲಾಪರಾಧದ ವಿವೇಚನೆಯನ್ನು ಕೇವಲ ನ್ಯಾಯಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ. ಮಕ್ಕಳನ್ನು ಸುಧಾರಿಸುವ ಮತ್ತು ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಸಮಸ್ಯೆಯನ್ನು ಸಾಮಾಜಿಕ ನೈತಿಕ ಧಾರ್ಮಿಕ ಮಾನಸಿಕ ಹೀಗೆ ಅನೇಕ ರೀತಿಯಿಂದ ಬಗೆಹರಿಸಲು ಯೋಗ್ಯ ಶಿಕ್ಷಣ ಮತ್ತು ವಾತಾವರಣಗಳನ್ನು ಕಲ್ಪಿಸಲಾಗುತ್ತಿದೆ. ವಿಶ್ವಸಂಸ್ಥೆಯೂ ಸೇರಿದಂತೆ ಎಲ್ಲ ದೇಶಗಳೂ ಈ ದಿಶೆಯಲ್ಲಿ ಕ್ರಮಕೈಗೊಳ್ಳುತ್ತಿವೆ. ಬಾಲಾಪರಾಧಿಗಳ ವಯೋಮಿತಿ ದೇಶದಿಂದ ದೇಶಗಳಿಗೆ ಬೇರೆ ಬೇರೆ ಆಗಿದೆ. ಕೆಳಸ್ತರದ ವಯಸ್ಸು 8 ರಿಂದ 14 ಇದ್ದರೆ, ಮೇಲಿನ ಗಡುವು 14 ರಿಂದ 21ರ ತನಕ ಇದೆ.

ಭಾರತದ ಸಂವಿಧಾನದ ಮೇರೆಗೆ ಬಾಲಾಪರಾಧದ ವಿಷಯ ರಾಜ್ಯಸೂಚಿಯಲ್ಲಿದ್ದು ಎಲ್ಲ ರಾಜ್ಯಗಳಲ್ಲಿಯೂ ಮಕ್ಕಳ ಕಾನೂನುಗಳು ಆಚರಣೆಯಲ್ಲಿವೆ. ಕರ್ನಾಟಕದಲ್ಲಿ ಕರ್ನಾಟಕ ಮಕ್ಕಳ ಕಾನೂನು (1964) ಜಾರಿಯಲ್ಲಿದೆ. ಮಕ್ಕಳ ಮತ್ತು ಬಾಲಾಪರಾಧಿಗಳ ಮೇಲ್ವಿಚಾರಣೆ, ರಕ್ಷಣೆ, ಪೋಷಣೆ, ಕಲ್ಯಾಣ, ತರಬೇತಿ, ಶಿಕ್ಷಣ ಮತ್ತು ಪುನರ್ವಸತಿ ಹಾಗೂ ಬಾಲಾಪರಾಧಿಗಳ ವಿಚಾರಣೆ ಇವುಗಳನ್ನು ಕುರಿತು ಉಪಬಂಧಗಳು ಈ ಕಾನೂನಿನಲ್ಲಿ ಇವೆ. ರಾಜ್ಯದಲ್ಲಿ 24 ರಕ್ಷಣಾ ಗೃಹಗಳು (ರಿಮ್ಯಾಂಡ್ ಹೋಮ್) ಇವೆ. ಅವುಗಳಲ್ಲಿ ಹದಿನೆಂಟು ಸರಕಾರದ ನಿಯಂತ್ರಣ ದಲ್ಲೂ ಉಳಿದ ಆರು ಜಿಲ್ಲಾ ಪ್ರೊಬೇಶನ್ ಮತ್ತು ಅನಂತರದ ಮೇಲ್ವಿಚಾರಣಾ ಸಂಸ್ಥೆಗಳ ಆಡಳಿತದಲ್ಲೂ ಇವೆ.

ನಿರ್ಲಕ್ಷಿತ, ತೊಂದರೆಗೊಳಗಾದ, ನಿಯಂತ್ರಣಕ್ಕೆ ಮೀರಿದ, ಉದ್ಧಟ ಮಕ್ಕಳನ್ನು ಮತ್ತು ಬಾಲಾಪರಾಧಿಗಳನ್ನು ರಕ್ಷಣಾ ಗೃಹಗಳಲ್ಲಿ ಇಡಲಾಗುವುದು. ಅವರ ನಡತೆ ಶೀಲ ಮತ್ತು ಹಿಂದಿನ ಘಟನಾವಳಿಗಳನ್ನು ಪರಿಶೀಲಿಸಿ ಪ್ರೊಬೇಶನ್ ಅಧಿಕಾರಿಗಳು ಪರೀಶೀಲನಾವರದಿಗಳನ್ನು ಸಲ್ಲಿಸುವರು. ಆ ವರದಿಗಳನ್ನು ಮಕ್ಕಳ ನ್ಯಾಯಾಲಯಗಳು ಪರಿಗಣಿಸಿ ನಿರ್ಣಯ ನೀಡುತ್ತವೆ. ಅಂಥ ನಿರ್ಣಯಗಳ ಮೇರೆಗೆ ಪ್ರಮಾಣಿತ ಶಾಲೆಗಳಲ್ಲಿ ಬಾಲಾಪರಾಧಿಗಳನ್ನು ಇಟ್ಟುಕೊಂಡು ಅವರ ಮುಂದಿನ ಪುನರ್ವಸತಿಯ ದೃಷ್ಟಿಯಿಂದ ಶಿಕ್ಷಣ, ತರಬೇತಿ ವಗೈರೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವೃತ್ತಿ ತರಬೇತಿಗಳನ್ನು ಸಹ ಕೊಡಲಾಗುತ್ತಿದೆ; ರಾಜ್ಯದಲ್ಲಿ ಈಗ 14 ಪ್ರಮಾಣಿತ ಶಾಲೆಗಳಿವೆ. ಅವುಗಳಲ್ಲಿ ಮೂರು ಹುಡುಗಿಯರವು. ಮಾನಸಿಕ ರೋಗಿಗಳಾದ ಬಾಲಾಪರಾಧಿಗಳಿಗೆ ಪ್ರತ್ಯೇಕ ಪ್ರಮಾಣಿತ ಶಾಲೆ ಇದೆ. ಅಲ್ಲದೆ ಸೂಕ್ತ ವ್ಯಕ್ತಿ ಸಂಸ್ಥೆಗಳು ಇವೆ. ಇವುಗಳಿಗೆ ಮಕ್ಕಳ ಕಾನೂನಿನ ಪ್ರಕಾರ ಅಂಗೀಕರಿಸಿದ ಅನಾಥ ಆಶ್ರಮಗಳಿಗೆ ಮತ್ತು ಸಾರ್ವಜನಿಕ ಕಾನೂನಿನ ಪ್ರಕಾರ ಸಹಾಯ ಧನವನ್ನು ನೀಡುತ್ತಿದೆ.

ಪ್ರೊಬೇಶನ್ ಅಧಿಕಾರಿಗಳು ಪೋಲೀಸರು ಸಾಮಾಜಿಕ ಕಾರ್ಯಕರ್ತರು ಮತ್ತು ಶಿಕ್ಷಕರು ಬಾಲಾಪರಾಧಿಗಳನ್ನು ಸುಧಾರಿಸುವ ಕಾರ್ಯದಲ್ಲಿ ಮುಖ್ಯ 
ಪಾತ್ರವಹಿಸಬೇಕಾಗುತ್ತದೆ. ಸುಧಾರಿತ ಸಾಮಾಜಿಕ ಪರಿಸರ ಮತ್ತು ಶಿಕ್ಷಣ ಮಗುವನ್ನು ಪಾತಕ ಪ್ರವೃತ್ತಿಯಿಂದ ತಡೆಯಲು ಸಾಧ್ಯ.									(ಎಲ್.ಎಸ್.ಜೆ.)

ದಾರಿತಪ್ಪಿದ ಮಕ್ಕಳನ್ನು ತಿದ್ದಿ ರಕ್ಷಿಸುವ ಹೊಣೆ ಸಮಾಜದ್ದು ಎಂಬ ಅರಿವು ದೇಶದಲ್ಲಿ ಈಗ ಮೂಡಿದೆ. ಬಡಮಕ್ಕಳಿಗೆ ಸಹಾಯ ಒದಗಿಸುವ, ಶಾಲೆ ಮತ್ತು ಕುಟುಂಬಗಳ ಪರಿಸರವನ್ನು ಉತ್ತಮಗೊಳಿಸುವ, ವೃತ್ತಿ ಅವಕಾಶಗಳನ್ನು ಕೊಟ್ಟು ಮರ್ಯಾದೆಯಿಂದ ಬಾಳುವಂತೆ ಮಾಡುವ ಹಾಗೂ ಸ್ಥಳೀಯ ಸಮುದಾಯಗಳಲ್ಲಿ ತೊಡಗಿಸಿ ನಿಯಂತ್ರಿಸುವ ಅನೇಕ ಪ್ರಯತ್ನಗಳು ನಡೆದಿರುವುದು ದೇಶದ ಹಿತದೃಷ್ಟಿಯಿಂದ ಆರೋಗ್ಯಕರ ಲಕ್ಷಣ ಎನ್ನಬಹುದು.				      (ಎಚ್.ವಿ.ಎನ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ